ಡರ್ಬಾನ್
ದಕ್ಷಿಣ ಆಫ್ರಿಕ ಗಣರಾಜ್ಯದ ಮುಖ್ಯ ರೇವುಪಟ್ಟಣ, ಮೂರನೆಯ ದೊಡ್ಡ ನಗರ. ನಟಾಲ್ ಪ್ರಾಂತ್ಯದ ನಗರಗಳಲ್ಲಿ ಅತ್ಯಂತ ದೊಡ್ಡದು. ಆಗ್ನೇಯ ತೀರದಲ್ಲಿ ಹಿಂದೂಸಾಗರಕ್ಕೆ ಅಭಿಮುಖವಾಗಿದೆ. ಉಮ್ಗೇನೀ ಮತ್ತು ಉಮ್ಲಾಸ್ ನದಿಗಳ ನಡುವೆ ಇದೆ. ಜನಸಂಖ್ಯೆ 7,29,857 (1970). ಡರ್ಬಾನ್ ದ. ಅ. 300ಯ ಒಳಗೇ ಇದೆ. ಮೊಜಾóಂಬಿಕ್ ಉಷ್ಣೋದಕ ಪ್ರವಾಹ ದಕ್ಷಿಣಾಭಿಮುಖವಾಗಿ ಇದರ ಬಳಿ ಹರಿಯುತ್ತದೆ. ಇಲ್ಲಿಯದು ಉಪೋಷ್ಣವಲಯದ ವಾಯುಗುಣ. ಜುಲೈ ಮತ್ತು ಜನವರಿಗಳ ಸರಾಸರಿ ಉಷ್ಣತೆ ಅನುಕ್ರಮವಾಗಿ 61.90 ಫ್ಯಾ. ಮತ್ತು 74.70 ಫ್ಯಾ. ಸರಾಸರಿ ಮಳೆ 400. ಡರ್ಬಾನ್ ನಗರದ ದಕ್ಷಿಣದಲ್ಲಿ ಹಸಿರು ತುಂಬಿದ ಮರಳು ದಿಣ್ಣೆಯೊಂದು ಸಮುದ್ರವನ್ನು ಬಂದರಿನ ಕೊಲ್ಲಿಯಿಂದ ಬೇರ್ಪಡಿಸಿದೆ. ಸು. 6 ಚ.ಮೈ. ವಿಸ್ತಾರವಾಗಿರುವ ಈ ದಿಣ್ಣೆಯ ಹೆಸರು ಬ್ಲಫ್. ಸು. 600’ ಅಗಲದ ಪ್ರವೇಶ ಕಾಲುವೆ ಈ ದಿಣ್ಣೆಯನ್ನು ಉತ್ತರದ ಕಡೆಯಲ್ಲಿ ಬೇರ್ಪಡಿಸಿದೆ. ಸಮುದ್ರತೀರದುದ್ದಕ್ಕೂ ಹುಲ್ಲು ಬಯಲುಗಳುಂಟು. ಅವುಗಳ ಹಿನ್ನೆಲೆಯಲ್ಲಿ ಅಲಂಕಾರಿಕ ಉದ್ಯಾನಗಳಿವೆ. ಅಲ್ಲಿ ಆಧುನಿಕ ಹೋಟೆಲುಗಳೂ ಇತರ ಭವ್ಯ ಕಟ್ಟಡಗಳೂ ಇವೆ. ಉತ್ತರದ ಉಮ್ಗೇನೀ ನದಿಯ ವರೆಗೂ ಹರಡಿರುವ ಬೀಚುಗಳುಂಟು. ನಗರದ ಮುಖ್ಯ ರಸ್ತೆ ವೆಸ್ಟ್ ಸ್ಟ್ರೀಟ್. ಅದಕ್ಕೆ ಸಮಾಂತರವಾಗಿ ಸ್ಮಿತ್ ಸ್ಟ್ರೀಟ್ ಇದೆ. ಸುಂದರವಾದ ಗುಮ್ಮಟದಂಥ ನಗರಭವನ ಇರುವುದು ಇವೆರಡರ ಮಧ್ಯದಲ್ಲಿ. ಅದರಲ್ಲಿ ಗ್ರಂಥಾಲಯ, ಕಲಾ ಮತ್ತು ಇತರ ವಸ್ತುಗಳ ಸಂಗ್ರಹಾಲಯಗಳಿವೆ. ನಗರ ಭವನದ ಉತ್ತರಕ್ಕೆ ಮುಖ್ಯ ರೈಲ್ವೆನಿಲ್ದಾಣ ಮತ್ತು ಹಳೆಯ ಕೋಟೆ (1842) ಇವೆ. ಡರ್ಬಾನಿನಲ್ಲಿ ಭಾರತೀಯರ ಮತ್ತು ಬಂಟುಗಳ ಮಾರುಕಟ್ಟೆಗಳಿವೆ. ಯೂರೋಪಿಯನ್ನರು ಕೇಂದ್ರಸ್ಥಳದಲ್ಲಿ ವಾಸಿಸುತ್ತಾರೆ. ಈ ವಲಯದ ಹೆಸರು ಬಿರೀಯ. ಅದರ ಕೆಳ ಹಂತದಲ್ಲಿ ಹೆಚ್ಚಾಗಿ ಏಷ್ಯನರಿದ್ದಾರೆ. ಗಾತಿಕ್ ಶೈಲಿಯ ರೋಮನ್ ಕ್ಯಾತೊಲಿಕ್ ಚರ್ಚ್, ಸಾರ್ವಜನಿಕ ಗ್ರಂಥಾಲಯ, ವಸ್ತುಸಂಗ್ರಹಾಲಯ, ರಂಗಮಂಟಪ ಇವು ಇತರ ಕೆಲವು ಕಟ್ಟಡಗಳು. ದಕ್ಷಿಣ ಆಫ್ರಿಕ ವಿಶ್ವವಿದ್ಯಾಲಯದ ಮನ್ನಣೆ ಪಡೆದ ನಟಾಲ್ ವಿಶ್ವವಿದ್ಯಾಲಯದ (1910) ಶಾಖೆ, ಭಾರತೀಯ ಸಂಜಾತ ವಿದ್ಯಾರ್ಥಿಗಳಿಗಾಗಿ ಸ್ಥಾಪಿತವಾದ ಡರ್ಬಾನ್ ವಿಶ್ವವಿದ್ಯಾಲಯ (1960), ಎಂ. ಎಲ್. ಸುಲ್ತಾನ್ ತಾಂತ್ರಿಕ ಕಾಲೇಜು (1946) ಮತ್ತು ರಾಷ್ಟ್ರೀಯ ವೈಜ್ಞಾನಿಕ ಸಂಶೋಧನ ಸಂಸ್ಥೆಗಳು ಇಲ್ಲಿವೆ.
(ಡಿ.ಎಸ್.ಜೆ; ಪಿ.ಎಂ.ಯು.ಎಸ್.)

ಈ ನಗರ ಉದ್ಯಾನಗಳಿಗೆ ಪ್ರಸಿದ್ಧವಾದ್ದು. ಇಲ್ಲಿಯ ಸರ್ಪೋದ್ಯಾನದಲ್ಲಿ ನೈಸರ್ಗಿಕ ಪರಿಸರಲ್ಲಿ ಅನೇಕ ಬಗೆಯ ಹಾವುಗಳುಂಟು. ಸಾಗರಜೀವಿ ಸಂಗ್ರಹಾಲಯವೂ ಇದೆ. ಸಸ್ಯಶಾಸ್ತ್ರಕ ಉದ್ಯಾನಗಳಿವೆ. ದಕ್ಷಿಣ ಆಫ್ರಿಕ ಮತ್ತು ರ್ಹೋಡೀಷಿಯದವರಿಗೆ ಈ ನಗರ ರಜಾದಿನದ ವಿಹಾರ ಸ್ಥಳ.

ಡರ್ಬಾನ್ ದಕ್ಷಿಣ ಆಫ್ರಿಕದ ಸಕ್ಕರೆ ಉದ್ಯಮದ ಕೇಂದ್ರ. ಹತ್ತಿಬಟ್ಟೆ, ಸಾಬೂನು, ರಬ್ಬರ್, ಗೊಬ್ಬರ, ಬಣ್ಣ, ರಾಸಾಯನಿಕಗಳು, ಬೆಂಕಿಕಡ್ಡಿ, ಟೈರು, ಗಾಜು, ಪ್ಲಾಸ್ಟಿಕ್ ಮೊದಲಾದವುಗಳನ್ನು ತಯಾರಿಸುವ ಕಾರ್ಖಾನೆಗಳಿವೆ. ಇಲ್ಲಿ ರೈಲು ಕಾರ್ಯಾಗಾರವೂ ಎಣ್ಣೆಶುದ್ಧೀಕರಣ ಕಾರ್ಯಾಗಾರಗಳೂ ಇವೆ.

ಡರ್ಬಾನಿಗೆ ದಕ್ಷಿಣ ಆಫ್ರಿಕದ ಎಲ್ಲ ಭಾಗಗಳಿಂದಲೂ ರೈಲು ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕವುಂಟು. ಇಲ್ಲಿಗೆ 88 ಮೈ. ದಕ್ಷಿಣಕ್ಕೆ ಅಂತರರಾಷ್ಟ್ರೀಯ ವಿಮಾನನಿಲ್ದಾಣವಿದೆ. ರ್ಯಾಂಡ್ ಮತ್ತು ಉತ್ತರದ ಆರೆಂಜ್ ಫ್ರೀ ಸ್ಟೇಟ್‍ನ ಗಣಿ ಉದ್ಯಮ ಮತ್ತು ಕೈಗಾರಿಕೆಗಳಿವೆ ಇದು ಅತಿ ಹತ್ತಿರದ ಬಂದರು. ಅದುರುಗಳು, ಮ್ಯಾಂಗನೀಸ್, ಧಾನ್ಯ, ಸಕ್ಕರೆ, ಕಲ್ಲಿದ್ದಲು, ಉಣ್ಣೆ, ಚರ್ಮ-ಇವು ಮುಖ್ಯ ರಫ್ತುವಸ್ತುಗಳು. ಪೆಟ್ರೋಲಿಯಂ, ಇಂಧನ, ಮರಮುಟ್ಟು-ಇವು ಮುಖ್ಯ ಆಮದು ವಸ್ತುಗಳು.
ಇತಿಹಾಸ. ವ್ಯಾಸ್ಕೋ ಡ ಗ್ಯಾಮ 1497ರ ಕ್ರಿಸ್‍ಮಸ್ ದಿನದಂದು ಡರ್ಬಾನ್ ಬಂದರು ಪ್ರದೇಶವನ್ನು ಕಂಡ. 1824ರಲ್ಲಿ ಫ್ರಾನ್ಸಿಸ್ ಜಿ. ಫೇರ್‍ವೆಲ್ ನೇತೃತ್ವದಲ್ಲಿ ಒಂದು ತಂಡ ಇಲ್ಲಿಗೆ ಬಂದಿಳಿಯಿತು. ಅವನೇ ಡರ್ಬಾನನ್ನು 1824ರಲ್ಲಿ ಸ್ಥಾಪಿಸಿದವನು. ಅವನು ಜೂóಲೂ ದೊರೆಯಿಂದ ತೀರದಲ್ಲಿ ಸ್ವಲ್ಪ ಪ್ರದೇಶವನ್ನು ಪಡೆದುಕೊಂಡ. 1828ರಲ್ಲಿ ಇನ್ನೂ ಹೆಚ್ಚಿನ ಪ್ರದೇಶ ದೊರೆಯಿತು. ಅದರಲ್ಲಿ ಈಗಿನ ಡರ್ಬಾನಿನ ಪ್ರದೇಶವೂ ಸೇರಿತ್ತು. ಮುಂದೆ ಇದು ಬ್ರಿಟಿಷ್ ಮುಂಗಾವಲು ಪಡೆಯ ಠಾಣ್ಯವಾಗಿತ್ತು.

ಈ ಸ್ಥಳದಲ್ಲಿ ಒಂದು ಪಟ್ಟಣವನ್ನು ನಿರ್ಮಿಸಬೇಕೆಂದು 1835ರಲ್ಲಿ ನೌಕಾಧಿಕಾರಿ ಆಲೆನ್ ಫ್ರಾನ್ಸಿಸ್ ಗಾರ್ಡಿನರ್ ಇಲ್ಲಿ ಸೇರಿಸಿದ್ದ 15 ಜನ ನೆಲಸಿಗರ ಸಭೆಯಲ್ಲಿ ನಿರ್ಣಯವಾಯಿತು. ಇದಕ್ಕೆ ಕೇಪ್ ಕಾಲೊನಿಯ ಗವರ್ನರ್ ಬೆಂಜಮಿನ್ ಡರ್ಬಾನನ ಹೆಸರಿಡಲು ತೀರ್ಮಾನಿಸಲಾಯಿತು. ಸ್ಥಳೀಯರೊಂದಿಗೆ ಬ್ರಿಟಿಷರು ಹೋರಾಟ ನಡೆಸಿದರು. ನಟಾಲ್ ಬ್ರಿಟಿಷ್ ಪ್ರದೇಶವೆಂದು 1843ರಲ್ಲಿ ಘೋಷಿಸಲಾಯಿತು. 1854ರಲ್ಲಿ ಡರ್ಬಾನ್‍ಗೆ ಬರೋ ಸ್ಥಾನ ದೊರಕಿತು. 1935ರಲ್ಲಿ ಇದು ನಗರವಾಯಿತು.

ಮಹಾತ್ಮ ಗಾಂಧಿಯವರು 1893ರಲ್ಲಿ ಡರ್ಬಾನಿನಲ್ಲಿ ವಕೀಲಿಯನ್ನು ಪ್ರಾರಂಭಿಸಿದರು. ಅವರು ಅಲ್ಲಿ ವರ್ಣಭೇದ ನೀತಿಯ ವಿರುದ್ಧ ಸತ್ಯಾಗ್ರಹ ಚಳವಳಿ ನಡೆಸಿ ಯಶಸ್ವಿಯಾದರು. 1915ರಲ್ಲಿ ಅವರು ಭಾರತಕ್ಕೆ ಮರಳಿದರು.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ